Friday 16 January 2015

ಚಪಾತಿ ಹೇಗಿರಬೇಕು ಎಂದರೆ "ಚಪಾತಿ ಮನೆಯ ಚಪಾತಿಯಹಾಗೆ" !





ಬಹಳ ಹಿಂದಿನ ಕಥೆಯಲ್ಲ, ಕೇವಲ ಹನ್ನೆರಡು ವರ್ಷಗಳ ಹಿಂದೆ ವರ್ಷಗಳ ಹಿಂದಿನ ಘಟನೆಯಿದು; ಜೀವನ ರಂಗದಲ್ಲಿ ಲೋಕಲ್ ಟ್ರಾನ್ಸ್ ಪೊರ್ಟ್ ವ್ಯವಹಾರದಲ್ಲಿ ಬದುಕು ರೂಪಿಸಿಕೊಳ್ಳುತ್ತ ನಾಲ್ಕು ಲಾರಿಗಳ ಮಾಲೀಕರಾಗಿದ್ದ  ಲಕ್ಷ್ಮಣರಾಯರಿಗೆ ಕಾರಣಾಂತರಗಳಿಂದ ವ್ಯಾವಹಾರಿಕವಾಗಿ ಬಹಳ ನಷ್ಟ ಸಂಭವಿಸಿತು. ಬದುಕಿಗಾಗಿ ಇನ್ನೊಂದು ಉದ್ಯಮವನ್ನಾದರೂ ಮಾಡಬೇಕೆಂಬ ಆಲೋಚನೆಯಂತೂ ಮನದಲ್ಲಿತ್ತು-ಆದಎ ಯಾವುದೆಂದು ನಿರ್ಧಾರವಾಗಿರಲಿಲ್ಲ.  ಮಗುವಿಗೆ ಜನ್ಮ ಸಮಯದಲ್ಲಿ ಬಿದ್ದ ಹೊಡೆತದಿಂದ ಎಡಭುಜದಲ್ಲಿ ಅಸಾಧ್ಯ ನೋವಿತ್ತು. ನೋವಿನಿಂಂದ ಒದ್ದಾಡುತ್ತಿದ್ದ ಮಗುವಿಗೆ ತಾತ್ಕಾಲಿಕ ಉಪಶಮನಗೌ ನಡೆದರೂ ಶಾಶ್ವತ ಪರಿಹಾರವನ್ನು ಕೊಡಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ದೊಡ್ಡಾಸ್ಪತ್ರೆಗೆ ಕರೆತಂದಿದ್ದರು; ಆಸ್ಪತ್ರೆಯ ಖರ್ಚಿಗೂ ಸಹ ಅವರಲ್ಲಿ ಹಣವಿರಲಿಲ್ಲ, ಸಂಸಾರದ ಬಂಡಿಗೂ ಹಣವಿರಲಿಲ್ಲ. ಬೆಂಗಳೂರಿಗೆ ಬಂದಿದ್ದಂತೂ ಆಯ್ತು-ಮರಳಿ ಹೋಗಲು ದುಡ್ಡಿಲ್ಲದಷ್ಟು ಆಪತ್ತು!

ಬೆಂಗಳೂರಿನಲ್ಲಿ ಅನೇಕ ಜನ, ವಿಭಿನ್ನ ಕ್ಷೇತ್ರಗಳಲ್ಲಿ ದುಡಿದು, ತಮ್ಮ ಜೀವನರಥವನ್ನು ನಡೆಸುತ್ತಾರೆಂಬುದನ್ನ ಬಲ್ಲ ಅವರಿಗೆ ಇಲ್ಲೇ ತಾನೇಕೆ ಯಾವುದಾದರೂ ಕೆಲಸ ಮಾಡಬಾರದು ಎನಿಸಿತು. ಆಂಗ್ಲ ಭಾಷೆ ಸ್ಪಷ್ಟವಾಗಿ ಬಾರದ್ದರಿಂದ ಯಾವ ಕೆಲಸವನ್ನು ಮಾಡುವುದು ಎಂಬ ಸಮಸ್ಯೆಯೂ ಎದುರಾಯ್ತು. ಏರುಯೌವ್ವನದಲ್ಲಿಯೇ ಲಾರಿಗಳ ಮಾಲೀಕರಾಗಿದ್ದ ಅವರಿಗೆ ಇನ್ನೊಬ್ಬರಲ್ಲಿ ಕೆಲಸ ಬೇಡಲು ನಾಚಿಕೆ ಎನಿಸಿತು. ಪತ್ನಿಯೊಂದಿಗೆ ಇನ್ನೇನು ಊರಿಗೆ ಮರಳಿ ಹೋಗಬೇಕೆನ್ನುವ ಹಂತದಲ್ಲಿ ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ಪರಿಚಿತವಾದ ವ್ಯಾಪಾರೀ ಮಹಿಳೆಯೋರ್ವರು ಸಮಾಧಾನ ಹೇಳಿದರು. "ಶಿವ-ಪಾರ್ವತಿಯರ ಹಾಗೆ ಬಂದಿದ್ದೀರಿ, ಜೀವನಕ್ಕೆ ಆಧಾರ ಹುಡುಕುತ್ತ ಬೇಜಾರಾಗಿ ಮರಳಿ ಹೋಗಬೇಡಿ, ಚಪಾತಿಗಳನ್ನು ತಯಾರಿಸಿ ಹೋಟೆಲ್‍ಗಳಿಗೆ ನೀಡಿ,ಅದರಿಂದ ನಿಮಗೆ ಅನುಕೂಲವಾಗುತ್ತದೆ" ಎಂದು ಸಲಹೆ ನೀಡಿದರು. ಆ ಮಾತನ್ನೇ ಧನಾತ್ಮಕವಾಗಿ ಸ್ವೀಕರಿಸಿದ ಈ ದಂಪತಿ ಅಲ್ಲಿಂದೀಚೆಗೆ ಮಲೆನಾಡಿಗೆ ಮರಳುವ ಯೋಚನೆ ಕೈಬಿಟ್ಟು, ಆರಂಭಿಕ ಹಂತದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳಿಗೆ ಉತ್ತರದಾಯಿತ್ವ ಇಟ್ಟುಕೊಂಡು ಚಪಾತಿ ಮಾಡಲಾರಂಭಿಸಿದರು. ಜ್ಯೋತಿಷ್ಯ ಹೇಳುತ್ತಿದ್ದ ಶ್ರೀಪಾದ ಭಟ್ಟರೂ ಸಹ "ನಿಮಗೆ ಚಪಾತಿ ವ್ಯವಹಾರದಿಂದ ಅಭಿವೃದ್ಧಿಯಾಗುತ್ತದೆ, ಧೈರ್ಯದಿಂದ ಮುನ್ನಡೆಸಿ" ಎಂದು ಹೇಳಿದರು.

ಮಲೆನಾಡಿನ ಸುಂದರ ವಾತಾವರಣದಿಂದ ಕಾಂಕ್ರೀಟ್ ಕಾಡಾದ ಬೆಂಗಳೂರಿಗೆ ಬಂದು ನೆಲೆಸಿದ ದಂಪತಿಗೆ ಆರಂಭದ ದಿನಗಳು ಸುಲಭವೇನೂಒ ಆಗಿರಲಿಲ್ಲ. ಮಕ್ಕಳು ಚಿಕ್ಕವರು-ಅವರ ಆರೋಗ್ಯ, ವಿದ್ಯೆ, ಅನುಪಾನಗಳನ್ನು ನೋಡಿಕೊಳ್ಳಬೇಕು. ಜೊತೆಗೆ ಉದರಂಭರಣೆಗೆ ಚಪಾತಿ ತಯಾರಿಸುವ ಕೈಂಕರ್ಯ ನಡೆಸಬೇಕು. ಚಪಾತಿ ತಯಾರಿಸಿದರೆ ಮುಗಿಯಿತೇ? ಅದನ್ನು ಮಾರಾಟ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಒಟ್ಟಿಗೇ ಖರೀದಿಸುವ ಹೊಸಹೊಸ ಗಿರಾಕಿಗಳನ್ನು ಹುಡುಕಬೇಕು. ಗಂಡ-ಹೆಂಡಿರಲ್ಲಿ ಗಂಡ ಕಚ್ಚಾಸಾಮಾಗ್ರಿಗಳನ್ನು ಪೂರೈಸುತ್ತ, ಅಷ್ಟಿಷ್ಟು ಕೆಲಸ ಮಾಡಿಕೊಡುತ್ತ ಗಿರಾಕಿಗಳನ್ನು ಹುಡುಕುವ ಕೆಲಸವನ್ನೂ ಮಾಡಿದರು. ಲಕ್ಷ್ಮಣ ರಾಯರ ಪತ್ನಿ ಲಕ್ಷ್ಮೀದೇವಿಯವರು ಪತಿಯ ಜೊತೆಗೆ ಪ್ರತಿನಿತ್ಯ ಬೆಳಗಿನ ಜಾವ ಮೂರು-ನಾಲ್ಕು ಗಂಟೆಗೇ ಎದ್ದು ಚಪಾತಿ, ಪಲ್ಯ ಮಾಡಲು ಆರಂಭಿಸಿದರು. ಅವರಿದ್ದ ಮನೆಯ ಸುತ್ತಲ ಜನ ಚಪಾತಿಯ ಜೊತೆಗೆ ಬೆಳಿಗ್ಗೆ ತಿನ್ನಬಹುದಾದ ಕೆಲವು ತಿಂಡಿಗಳನ್ನೂ ಕೇಳ ತೊಡಗಿದರು. ಹೀಗಾಗಿ ಇರುವ ಇಬ್ಬರಿಗೆ ಮೈಮುರಿಯುವಷ್ಟು ಕೆಲಸಗಳ ಒತ್ತಡವಿತ್ತು. ವಿಶ್ರಾಂತಿಯ ಬಗೆಗೆ ತಲೆ ಕೆಡಿಸಿಕೊಳ್ಳದೇ ಶ್ರಮಪಟ್ಟರು. ಚಪಾತಿಗೆ ಸಮರ್ಪಕ ಮಾರುಕಟ್ಟೆ ಲಭಿಸಿದಾಗ ಕೆಲಸಗಳ ಒತ್ತಡ ನಿವಾರಣೆಗೆ ಒಬ್ಬೊಬ್ಬರೇ ಸಹಾಯಕರನ್ನು ತೆಗೆದುಕೊಳ್ಳುತ್ತ ಹೋದರು.

ಚಪಾತಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಮಾರಾಟವಾದರೆ ಮಾತ್ರ ಜೀವನೋಪಾಯ ಸಾಧ್ಯವಿತ್ತು. ಹೀಗಾಗಿ ಆರಂಭದ ದಿನಗಳಲ್ಲಿ ಸರಿಸುಮಾರು ಐದುನೂರು ಹೋಟೆಲ್‍ಗಳಿಗೆ ಓಡಾಡಿದ ಲಕ್ಷ್ಮಣರಾಯರು, ಅವುಗಳ ಮಾಲೀಕರಲ್ಲಿ ಆರ್ಡರ್ಽಗಳಿಗಾಗಿ ವಿನಂತಿಸುತ್ತಿದ್ದರು. ಆ ಸಮಯದಲ್ಲಿಯೇ ಹೋಟೆಲ್‍ಗಳಲ್ಲಿ ಕೆಲಸಗಾರರ ಸಂಖ್ಯೆ ಕಡಿಮೆಯಾಗುತ್ತಿತ್ತು. ಸರಿಯಾಗಿ ಕೆಲಸಮಾಡುವವರು ಆಗಾಗ ಬಿಟ್ಟುಹೋಗುತ್ತಿದ್ದರು. ಊಟದ ಭಾಗವಾಗಿ ಚಪಾತಿ ನೀಡುವುದು ಬಹುತೇಕ ಎಲ್ಲಾ ಹೋಟೆಲ್‍ಗಳಲ್ಲೂ ಇತ್ತು. ಚಪಾತಿಗಳನ್ನು ತಯಾರಿಸಿ ಇಟ್ಟುಕೊಂಡರೆ ಗಟ್ಟಿಯಾಗಿ, ದೊರಗಾಗಿ ಗಿರಾಕಿಗಳಿಗೆ ಹಿಡಿಸುತ್ತಿರಲಿಲ್ಲ. ದಿನದ ಬಹಳ ಸಮಯದ ವರೆಗೆ ಮೆತ್ತಗಿರುವ ಚಪಾತಿಯನ್ನು ಒಂದೇ ಆಕಾರ ಮತ್ತು ಗುಣಮಟ್ಟದಲ್ಲಿ ತಯಾರಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆ ಕೆಲಸವನ್ನು ಲಕ್ಷ್ಮಣ ರಾಯರು ವಹಿಸಿಕೊಂಡು ಬೆಂಗಳೂರಿನಾದ್ಯಂತ ಅನೇಕ ಹೋಟೆಲ್‍ಗಳಿಗೆ ತಮ್ಮ ಚಪಾತಿಗಳನ್ನು ನಿತ್ಯವೂ ಪೂರೈಸತೊಡಗಿದರು. 

ಹನ್ನೆರಡು ವರ್ಷಗಳು ಸಂದ ಈ ಹೊತ್ತಿನಲ್ಲಿ ಅವರನ್ನು ಮಾತನಾಡಿಸಿದಾಗ ಅಂದಿಗೂ ಇಂದಿಗೂ ಇರುವ ವ್ಯತ್ಯಾಸಗಳನ್ನು ಹೇಳಿದರು; ಆದರೆ ಅಂದಿದ್ದ ಅದೇ ನಿಗರ್ವ ಮತ್ತು ಸರಳ ವ್ಯಕ್ತಿತ್ವ ಅವರಲ್ಲಿ ಇಂದಿಗೂ ಮನೆಮಾಡಿದೆ. ಇಂದು ಅವರ ಉದ್ಯಮ ಬೆಳೆದಿದ್ದು, ಚಪಾತಿಯ ಜೊತೆಗೆ ಅಕ್ಕಿರೊಟ್ಟಿ, ಒತ್ತು ಶ್ಯಾವಿಗೆ, ಕಾಯಿ ಕಡಬು, ಬಿಸಿ ಬೇಳೆ ಬಾತ್, ವಾಂಗೀಬಾತ್, ಮೊಸರನ್ನ, ಸಿಹಿತಿನಿಸುಗಳಲ್ಲಿ ಜಿಲೇಬಿ, ಜಹಾಂಗೀರ್, ಮೈಸೂರ್ ಪಾಕ್, ಬಾದಾಮ್ ಬರ್ಫಿ, ಹಾರ್ಲಿಕ್ಸ್ ಬರ್ಫಿ, ಹಾಲುಬಾಯಿ, ಮೋಹನ್ ಲಾಡು, ಬೂಂದಿ ಲಾಡು, ರವಾ ಉಂಡೆ, ಅಂತೆಯೇ ಕರಿದ ತಿನಿಸುಗಳಲ್ಲಿ ಚಕ್ಕುಲಿ, ಬೆಣ್ಣೆಚಕ್ಕುಲಿ, ಕೋಡುಬಳೆ, ಪಕೋಡ, ಬಜ್ಜಿ, ಅಂಬಡೆ ಮತ್ತು ಇನ್ನಿತರ ಎಲ್ಲಾ ವಿಧದ ಕಾಂಡಿಮೆಂಟ್ಸ್ ಖಾದ್ಯಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದಾರೆ. ಆಧಾರವಿಲ್ಲದಿದ್ದ ತಮಗೆ ಆಧಾರ ಕಲ್ಪಿಸಿಕೊಳ್ಳುವುದರ ಜೊತೆಗೆ ಇತರ ಕೆಲವರಿಗೂ ಜೀವನಾಧಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ. ವ್ಯವಹಾರವನ್ನು ಬೆಳೆಸುತ್ತ ನಡೆದು, ಕೆಲವು ವರ್ಷಗಳಿಂದ ಹೊರಾಂಗಣ ಅಡುಗೆ[ಔಟ್‍ಡೋರ್‍ ಕ್ಯಾಟರಿಂಗ್]ಗುತ್ತಿಗೆಯನ್ನೂ ಸಹ ತೆಗೆದುಕೊಳ್ಳುತ್ತಿದ್ದಾರೆ.

ಏನೂ ಇಲ್ಲದೇ ಇದ್ದಾಗ ಏನಾದರೂ ಸಾಧಿಸಬೇಕೆಂಬ ಆತ್ಮವಿಶ್ವಾಸ, ಶ್ರಮದ ಕೆಲಸಕ್ಕೆ ಒಗ್ಗಿಕೊಳ್ಳುವ ಮನೋಭಾವ, ಪ್ರಾಮಾಣಿಕತೆ, ಗುಣಮಟ್ಟದ ತಯಾರಿಕೆ ಇವಿಷ್ಟು ನಮಗೆ ಮುಖ್ಯ ಬಂಡವಾಳವಾಗಿದ್ದವು. ಜೊತೆಗೆ ಆರಂಭಿಕ ಹಂತದಲ್ಲಿ ತಾವಿದ್ದ ಬಾಡಿಗೆ ಕಟ್ಟಡದ ಮಾಲೀಕರ ಸಹಕಾರ, ಹತ್ತಿರದ ನೆಂಟರಲ್ಲಿ ಕೆಲವರ ಸಹಕಾರ, ಜ್ಯೋತಿಷಿ ಶ್ರೀಪಾದ ಭಟ್, ಭಾಷ್ಯಂ ಸರ್ಕಲ್‍ನಲ್ಲಿ ಸಲಹೆ ನೀಡಿದ ಮಹಿಳೆ, ಚಪಾತಿಯ ಹದ ಸರಿಪಡಿಸಲು ಕಲಿಸಿಕೊಟ್ಟ ಗೆಳೆಯರ ಬಳಗದ ಒಬ್ಬ ವೃದ್ಧ ಮಹಿಳೆ  ಮತ್ತು ಕಾರ್ಮಿಕರ ಸಹಕಾರವನ್ನು ಈ ದಂಪತಿ ಸ್ಮರಿಸಲು ಮರೆಯುವುದಿಲ್ಲ.   

ಇಂದು "ಚಪಾತಿ ಮನೆ" ಎಂದರೆ ಬೆಂಗಳೂರಿನಲ್ಲಷ್ಟೇ ಅಲ್ಲ, ಬೆಂಗಳೂರಿನಲ್ಲಿರುವ ಹಲವರ ಮೂಲಕ ಹಳ್ಳಿಗಳವರೆಗೂ ಇವರ ಖ್ಯಾತಿ ಜನಜನಿತ. ಚಪಾತಿ ಹೇಗಿರಬೇಕು ಎಂದರೆ "ಚಪಾತಿ ಮನೆಯ ಚಪಾತಿಯ  ಹಾಗೆ" ಎಂಬಷ್ಟು ಹೆಸರು ಮಾಡಿದ್ದಾರೆ. ಚಪಾತಿ ಮನೆಯ ವಿಳಾಸ ಮತ್ತು ಚರದೂರವಾಣಿಗಳು ಇಂತಿವೆ:

ಚಪಾತಿ ಮನೆ, # 141, ಮೂರನೇ  ಅಡ್ಡರಸ್ತೆ, 
ಎ ಜಿ ಬಿ ಲೇಔಟ್, ಮಹಾಲಕ್ಷ್ಮಿಪುರಂ, ಬೆಂಗಳೂರು-560086
ಚರ ದೂರವಾಣಿ : 9243478860, 9243124789 
--ಲೇಖನ ಕೃಪೆ : ಉದ್ದಿಮೆ ಮೀಡಿಯಾ